Writing poems, articles and experimental writings in my mother tongue Kannada is one of my favorite hobbies.
I use the penname Adichi - which stands for Anoop DIxith CHIkmagalur.
Below is a collection of my poems, articles, and writings in Kannada.
I also have unsuccessfully tried to add Kannada to Duolingo!

1. ಕರುಣಾಳು ಬಾ ಬೆಳಕೆ
______
ಮೊದಲೇನು ಅಷ್ಟು ಗೊಂದಲವಿರಲಿಲ್ಲ
ಆದರೆ ಐಸಾಕನು ಕಣವೆಂದು, ಮ್ಯಾಕ್ಸ್ವೇಲ್ಲನು ಅಲೆಯೆಂದು,
ಕೊನೆಗೆ ಅಲ್ಬೆರ್ಟನು ಅವೆರಡು ಸರಿಯೆಂದಾಗ
ಆದ ಗೊಂದಲವ ನಿವಾರಿಸಲು...
ಕರುಣಾಳು ಬಾ ಬೆಳಕೆ; ಮಸುಕಿದೀ ಮಬ್ಬಿನಲಿ
ಕೈ  ಹಿಡಿದು ನೆಡೆಸೆಮ್ಮನು

=================================
2. ಅದೆಂದೋ ಎಲ್ಲೊ ಓದಿದ ನೆನಪು
====================

ಅದೆಂದೋ ಎಲ್ಲೊ ಓದಿದ ನೆನಪು
ಮನಸು ಹಗುರಾದಷ್ಟು ಮೇಲೇರಿ ಹಾರುವುದಂತೆ
ಕನಸು ಭಾರವಾದಷ್ಟು ಮೇಲೇರಿ ಹಾರುವುದಂತೆ
ಅದೆಂದೋ ಎಲ್ಲೊ ಓದಿದ ನೆನಪು

ನೆನಪು ಹಳತಾದಷ್ಟು ಮಧುರವಂತೆ
ಮಧುವ ಸವಿಯುವ ನಾಲಿಗೆಯಂತೆ
ಹಳೆಯ ಹೊತ್ತಿಗೆಯ ಆಕಸ್ಮಾತ್ ತೆರೆದಾಗ
ಸಿಗುವ ನವಿಲ ಗರಿಯಂತೆ
ಅದೆಂದೋ ಎಲ್ಲೊ ಓದಿದ ನೆನಪು

ಅಸ್ತಿತ್ವ ವಾದ ಬಿಕ್ಕಟ್ಟಿನ ಚಿಂತೆ ಬದಿಗೆಸೆದು
ಅಸ್ತಿತ್ವವಾದ ಚೌಕಟ್ಟಿನ ಪೆರೇಡ್ ಹಿಂದಿಂದ
ಗಾಳಿಪಟದಂತೆ ಹಾರು ನಸುನಕ್ಕೆಂದು
ಅದೆಂದೋ ಎಲ್ಲೊ ಓದಿದ ನೆನಪು

=================================
3. ಓಣಿ
===
ಚಿಕ್ಕಂದಿನಲ್ಲಿ ನೋಡಿ ನಗುತ್ತಿದ್ದೆ -
ಎರಡು ಮನೆಗಳ ಮಧ್ಯದ ಓಣಿಯಲ್ಲಿ
ಕ್ರಿಕೆಟ್ ಆಡುವ ಹುಡುಗರದ್ದು ಒಂದೇ ಗಲಾಟೆ
ಯಾವುದರಲ್ಲೂ ಸಮ್ಮತಿ ಇಲ್ಲ

ಈಗ ಆಗಾಗ್ಗೆ  ಆ ನೆನಪಿನ ದೇಜ-ವು
ಎರಡು ಮನಗಳ ಮಧ್ಯದ ಓಣಿಯಲ್ಲಿ
ಫುಟ್ಬಾಲ್ ಆಡುವ ಭಾವನೆಗಳದ್ದು ಒಂದೇ ಗಲಾಟೆ
ಯಾವುದರಲ್ಲೂ ಸಮ್ಮತಿ ಇಲ್ಲ 
 
=================================
4. ನೀನು
====
ಕೆಲವು ಹುಡುಗಿಯರು ಮೇಣದ ತರ
ಬೆಚ್ಚಗಿನ ಭಾವಕ್ಕೆ ಕರಗಿ
ನೀರಾಗಿ ಹರಿಯುವರು

ಇನ್ನು ಕೆಲವರು ಕರ್ಪೂರ
ಕೊಂಚ ಗರಂ ಆದರೂ
ಆವಿಯಾಗಿ ಮಾಯವಾದಾರು

ನೀನು ಸಿಹಿ ಕ್ಷೀರ
ತಣ್ಣಗಿರೆ ತಂಪು
ಕಾದರೆ ಬಿಸಿ ಹಾಲು
ಕುದ್ದರೆ ಖೀರು
ಕೊನೆಗೆ ಒಡೆದರೂ ಪನೀರು

=================================
5. ಕಂಬನಿಯ ಅಳಲು
---------------------
ದುಃಖದ ಮೂಲ ಚಿಂತೇನಾ
ಮನದಲ್ಲೇ ಸಾಕುತಿ
ಏನೂ ತಪ್ಪೆಸಗದ ನನ್ನ
ಹೊರಗೇಕೆ ನೂಕುತಿ?

=================================
6. ಕುಕ್ಕರ್
====
ಇವಳು ಥೇಟ್ ಪ್ರೆಷರ್ ಕುಕ್ಕರ್ ಥರ
ಮನದೊಳಗೆ ಕುದೀತಿರೋ ವಿಷಯನ ಅರ್ಥ ಮಾಡ್ಕೋ
ಅಂತ ಮೂರ್ ಸಲ ವಿಸ್ಲೆ ಹೊಡಿತಾಳೆ
ಆಗ್ಲೂ ಕೇಳಲಿಲ್ಲ ಅನ್ಕೋ...  
ಸಿಡಿದುಬಿಡ್ತಾಳೆ.

=================================
7. ನೆನಪು
=======
ನೀ ಕಣ್ಣೆದುರು ಇರದಿದ್ದಾಗ
ಆಗಾಗ್ಗೆ ಬರುವ ನಿನ್ನ ನೆನಪು
ತಿಳಿಯದಂತೆ ಒಂದು ಕಿರುನಗೆಯ ಮೂಡಿಸುವಿದು

ಹೋಳಿ ಹುಣ್ಣಿಮೆಯಂದು
ಕೇರಿ ರಂಗೇರಿದ ಹಾಗೆ

ಹಳೆ ಹೊತ್ತಿಗೆಯ ಆಕಸ್ಮಾತ್ ತೆರೆದಾಗ
ಸಿಗುವ ನವಿಲುಗರಿಯ ಹಾಗೆ

ಸೂರ್ಯನ ಕಿರಣದಲಿ ಶಿಖರ ಮಿಂದ,
ಹೊಳೆವ ಧವಳಗಿರಿಯ ಹಾಗೆ  

ಚಾಟಿಯ ಜಾದೂಗೆ  ಗಿರ್ರನೆ ತಿರುಗುವ  
ಬಣ್ಣದ ಬುಗುರಿಯ ಹಾಗೆ

=================================
8. ಗಿಳಿ ಶಾಸ್ತ್ರ
======
ಶಾಸ್ತ್ರ ಹೇಳಿ ಹೇಳಿ ತನ್ನ
ಭವಿಷ್ಯ ರೂಪಿಸಿಕೊಂಡ
ಗಿಳಿಶಾಸ್ತ್ರ ಹೇಳುವವನ ಬಗ್ಗೆ
ನಂದೇನು ತಕರಾರಿಲ್ಲ.  
ಆದರೆ ಆ ಗಿಳಿಯ ಜೊತೆಗೆಯೇ  
ನನಗಷ್ಟು ಆಗ್ಬರಲ್ಲ!
ಶಾಸ್ತ್ರ ಹೇಳಲು ಪಂಜರದಿಂದ
ಹೊರಗೆ ಬಂದು  
ಚೀಟಿ ತೆಗೆದು ಕೊಟ್ಟು,
ವಿಶಾಲ ಆಗಸದತ್ತ  
ಪುರ್ರನೆ ಹಾರಿ ಹೋಗಿ
ತನ್ನ ಭವಿಷ್ಯ ರೂಪಿಸಿಕೊಳ್ಳದೆ
ಮತ್ತೆ ಮುಗ್ದವಾಗಿ ಪಂಜರದ
ಒಳಗೇ ಹೋಗಿ ಬಂಧಿಯಾಗುವ ಅದು
ನನ್ನ ಜ್ಯೋತಿಷ್ಯ ಹೇಳಬಲ್ಲದು ಅಂತ
ನನಿಗನ್ನಿಸೋಲ್ಲ

=================================
9. ಮೋಡ
-------
ಕಪ್ಪೆ ಮದುವೆ ಮಾಡಿದ ಮಾತ್ರಕ್ಕೆ
ಮೋಡ ಕವಿಯಲ್ಲ
ಅನ್ನೋದೇನೋ ಸರಿ.
ಆದರೆ ರಮ್ಯವಾದ ಮಲೆನಾಡಿನ
ಹಸಿರ ನೆಲ ಕೇಳಿ ಆಹ್ಲಾದಿಸುವ    
ಇಂಪಾದ, ತುಂತುರು ಮಳೆಯ
ಕವನವ ಬರೆದ ಮೋಡ
ಕವಿಯಲ್ಲ ಅನ್ನೋದೆಷ್ಟು ಸರಿ?

=================================
10. Bookmark
---------
ಹೆಂಗಸರ ತಲೆಯಲ್ಲಿ
ಕಾಣದ ಒಂದು ಸೌಕರ್ಯವಿದೆ
ಬೇಕಾದ್ದನ್ನು bookmark  
ಮಾಡುವ ಚಾತುರ್ಯವಿದೆ  
ಕಳೆದ ವಾರವಿರಲಿ, ಕಳೆದ ವರ್ಷವಿರಲಿ
ಅರ್ಧಕೆ ಬಿಟ್ಟ ವಾದವ ನಿಖರವಾಗಿ  
ಅಲ್ಲಿಂದಾನೆ ಆರಂಭಿಸಬಲ್ಲ
ಅದ್ಭುತ ಕಲೆಯ hallmark ಇದೇ

=================================
11. ಆಶಾವಾದಿ
=======
ನೀವೇನೇ ಹೇಳಿ, ಈ ಕವಿಗಳು ತೀರಾ ಆಶಾವಾದಿಗಳು

ಗಾಳಿ ನೀರಿರದ ಬಂಜರು ಮಣ್ಣಿನ ಚಂದ್ರನ
ಚೆಲುವೆಯ ಹೊಳೆವ ಮೊಗದ ಸೌಂದರ್ಯಕೆ ಹೋಲಿಸುವರು

ಸುಡುಸುಡುವ ಬೆಂಕಿಯ ಚೆಂಡಿನ ಬರುವಿಕೆಯ
ಮನೋರಮಣೀಯ ಸೂರ್ಯೋದಯವಾಗಿ ಮಾರ್ಪಡಿಸುವರು  

ನಿಂತ ನೀರಲ್ಲಿ ಕೂತ ಹೂಳನ್ನು, ಕಲೆತ ಕೆಸರನ್ನು ಕಾಣದೆ
ನಡುವೆ ಅರಳಿದ ಶ್ವೇತ ಕಮಲದ ಚೆಲುವ ವರ್ಣಿಸುವರು

ಅವೆಲ್ಲ ಏನೇನು ಅಲ್ಲ
ಬಂಧನವದು, ತೊಡಕಿನ ಸಾಗರವದು;
ಸಿಕ್ಕವರು ಕಷ್ಟಕೋಟಲೆಯ ಬಿಡಿಸಿ ಹೊರಬಾರರು
ಎಂದೆಲ್ಲ ಯೋಗಿವರ್ಯರು ಬಣ್ಣಿಸಿದ
ಸಂಸಾರ ನೌಕೆಯನು ಕೂಡ
ತಿಳಿ ಹಾಸ್ಯಭರಿತ ಚುಟುಕಾಗಿ ಪರಿವರ್ತಿಸುವರು  

ನೀವೇನೇ ಹೇಳಿ, ಈ ಕವಿಗಳು ತೀರಾ ಆಶಾವಾದಿಗಳು
=================================
12. ಸಾರ
----
ಬಾಳೆ ಎಲೆಯ ಮೇಲೆ ಬಡಿಸಿದ ತಿಳಿಯ ಸಾರ  
ಹಿಡಿಯದಿರೆ ಕಷ್ಟ, ನೀರಾದಸ್ಟೂ  
ಎಲೆ ಮೀರಿ ಹರಿದು ಹೋದೀತು

ಬಾಳ ಎಲೆಯ ಮೇಲೆ ಬಿಡಿಸಿದ ಜೀವನ ಸಾರ  
ಹಿಡಿಯದಿರೆ ಕಷ್ಟ, ನೀರಾದಸ್ಟೂ  
ಎಲ್ಲೆ ಮೀರಿ ಹರಿದು ಹೋದೀತು

=================================
13. ಗ್ರಂಥಾಲಯ
------------
ಬಾಳು ನನ್ನಂತೆ, ಖಾಲಿ ಪುಸ್ತಕದಂತೆ
ತೆರೆದ ಪುಟಗಳಲಿ ಬರೆಯಲಿ
ತಮ್ಮತನವ ಇತರರು  

ಕೇಳಿ ನಕ್ಕಿತು ಪಠ್ಯ ಪುಸ್ತಕವು
ಬೀಗುತ ಹೇಳಿತು ಇಂತು
ಬದುಕು ನನ್ನಂತೆ, ಸರ್ವಜ್ಞನಂತೆ
ನಿನ್ನ ನೋಡಿ ಕಲಿಯಲಿ ಎಲ್ಲರೂ  
ಕಲಿತು ಅರಿಯಲಿ ಸರ್ವರೂ

ನಗುತ ಹೇಳಿತು ನಿಘಂಟು
ಪಠ್ಯಪುಸ್ತಕವು ಅತಿ ಅಮೂಲ್ಯವದು
ಬರೇ ಪರೀಕ್ಷೆ ಮುಗಿಯುವವರೆಗೂ  
ಬದುಕು ಬದಲಿಗೆ ನಿಘಂಟುವಿನಂತೆ
ಇರಲಿ ಎಲ್ಲವುದಕ್ಕು ಒಂದು ಅರ್ಥ

ಕಿರುನಗೆಯ ಬೀರಿತು ಕೇಳಿ ಮಹಾಕಾವ್ಯ
ಕೇವಲಾರ್ಥವದು ವ್ಯರ್ಥ, ಬಾಳಲಿರಲಿ ಎಲ್ಲವೂ
ರಾಗ, ತಾಳ, ಲಹರಿ, ಛಂದಸ್ಸು
ಕಥೆ, ಮಹಾತ್ಮೆ, ಉಪಮೆ, ರೂಪಕವು
ಮಹಾಕಾವ್ಯದಂತಿರಲಿ ನಿನ್ನ ಬದುಕು

ನಿಮ್ಮಲ್ಲೆಲ್ಲರೂ ಸರಿ, ಎಲ್ಲರೂ ಅಸಮಗ್ರ
ನಿಮ್ಮೆಲ್ಲರ ಅಂಶವ ಹೊಂದಿರುವ ನಾನು
ಬಾಳ ದಾರಿಯ ದೀಪವಾದೇನು
ಕೊನೆಯಲ್ಲಿದ್ದ ಪುಸ್ತಕವದು
ಪವಿತ್ರ ಗ್ರಂಥವದು
ಭಗವದ್ಗೀತೆಯದು

=================================
14. ಜಟ್ಟಿ
-------
ಆ ಕಾಲದಿ ನಾಡಿಗೆಲ್ಲ
ನಾನೇ ಜಗಜಟ್ಟಿ
ಕಾಳಗದಿ ನನ್ನ ಮೆಟ್ಟಿ
ನಿಂದವರಿಲ್ಲ
ಕುಸ್ತಿಯಲಿ ಗೆಲ್ಲಲೆನ್ನ ಹುಟ್ಟಿ
ಬಂದವರಿಲ್ಲ
ತಲೆಗೆ ತಲೆ ಕೊಟ್ಟು
ಎದೆಗೆ ಎದೆ ನೆಟ್ಟು
ಅಖಾಡದಿ ಪಟುವಾಗಿ  
ಅರಸನಾಗಿ ಮೆರೆದಿದ್ದೆ

ಈಗ ವಯಸ್ಸು ಎಂಭತ್ತಾಯಿತು
ಅಥವಾ ಇನ್ನು ಹೆಚ್ಚೋ,
ತಿಳಿಯದಷ್ಟು ಮರವು  
ಮರವನೆತ್ತಿದ್ದ ತೋಳುಗಳು
ಜೋತು ಬಿದ್ದಿವೆ
ಹೊಳಪನೆದುರಿಸದ ಕಣ್ಣುಗಳು  
ಸೋತು ಬಿದ್ದಿವೆ

ತಿರುಗಿ ನೋಡಿದರೆ ಯೌವ್ವನದ ಬದುಕ, ನಂಬಲಾಗದ ಸತ್ಯ
ಕುಸ್ತಿಯಲ್ಲಿ ಗೆದ್ದವ ನಾನೋ, ಈ ಕಾಲವೋ, ಪ್ರಶ್ನೆ ಅನಗತ್ಯ  

=================================
15. ಗೆಳೆತನದ ಪ್ರಶ್ನೆ
-----------
"ಸಾಟಿಯಾಗಬಲ್ಲರೇ?", ಅಲ್ಲ.
"ಸಾಥಿಯಾಗಬಲ್ಲರೇ?"

=================================
16. ಹಿಮಾಲಯ
-----------
ಪ್ರೀತಿ ಸಿಗುವ ಮುನ್ನ ಪ್ರೀತಿ ಹಿಮಾಲಯ ಪರ್ವತ
ಹಿಮಾಚ್ಚಾದಿತ ಶಿಖರ,
ಏರಲಾಗದ ಎತ್ತರ,
ಸಹಿಸಲಾಗದಷ್ಟು ಶೀತ,
ಆಗ್ಗಾಗ್ಗೆ ಬೀಳುವ ಹಿಮಪಾತ,
ಉಸಿರುಗಟ್ಟಿಸುವ ತೆಳು ವಾಯು,
ಕೆಲವೇ ಕ್ಷಣಗಳ ಬೆಳಕು...

ಪ್ರೀತಿ ಸಿಕ್ಕ ಮೇಲೆ ಪ್ರೀತಿ ಹಿಮಾಲಯ ಪರ್ವತ
ಹಗೆ ಹಾರದ ನೈಸರ್ಗಿಕ ಗಡಿ
ಹರಿವ ಶುದ್ಧ ಗಂಗೆಯ ಮೂಲ
ಚಿರಂತನ ಬ್ರಹ್ಮಪುತ್ರದ ಸೆಳೆ  
ಪೂಜ್ಯ ಮಾನಸ ಸರೋವರದ ನೆಲೆ
ಸೂರ್ಯಕಿರಣದಲಿ ಮಿಂದ ಅನ್ನಪೂರ್ಣೆಯ ಸೊಬಗು
ಆಗದೆಂದನಿಸಿದ್ದ ಶೃಂಗವೇರಿದ ಹೆಮ್ಮೆ...
 
=================================
17. ಸತ್ವ
------------------
ಕನ್ನಡಕ ಹಾಕಿದೊಡೆ
ಕಣ್ಣ ದೃಷ್ಟಿ ಸರಿಯಾದೀತು
ನೋಡೋ ನೋಟ
ಸರಿಹೋದೀತೆ?

ಲೇಪನದ ಪರದೆಯಡಿ
ಅಧರವದು ರಂಗೇರೀತು
ಲೇಪನಕೆ ಮುಗುಳ್ನಗೆಯ
ಚೆಲುವ ಏರಿಸಲಾದೀತೇ?

ವ್ಯದ್ಯ ಕೊಟ್ಟ ಮುಲಾಮು ಗುಳಿಗೆ
ಗಾಯ ಮಾಸಿದರೆಂತು?
ಮನದೊಳೆದ್ದ ಮಾರುತವ ಒಂದು ಘಳಿಗೆ
ಶಮನಮಾಡೀತೇ?

=================================
18. ಜ್ಞಾನೋದಯ
----------------
ಯೌವ್ವನದಲಿ ನಂಬಿದ್ದೆ
ಬದುಕ ಸಾಗಿಸುವುದು
ಕಾರು ಓಡಿಸಿದಂತೆ
ಇಂಧನದ ಏರ್ಪಾಟೊಂದು
ಮಾಡಿದರೆ ಸಾಕದಕೆ
ಒಬ್ಬನೋ, ಇಬ್ಬರೋ,
ನಾಲ್ವರೊ
ಕೊನೆ ಕಾಣದ ರಹದಾರಿಯಲಿ
ಸರಾಗವಾಗಿ
ಸಾಗುತಲಿರಬಹುದೆಂದು

ಈಗ ತಿಳಿಯಿತು  
ಬದುಕ ಸಾಗಿಸುವುದದು
ಕಾರು ಓಡಿಸಿದಂತಲ್ಲ
ನಿಜವಾಗಿಯೂ ಅದು
ತೇರು ಎಳೆದಂತೆ
ನನಗೇ ತಿಳಿಯದಂತೆ
ಹತ್ತಾರು ಕೈಗಳು ನೆರೆದು
ಒಬ್ಬರಿಗೊಬ್ಬರು ಆಗುತ
ಜಗ್ಗುತ ಹಿಗ್ಗುತ ತಗ್ಗುತ
ಇರಿಸುಮುರಿಸು ತೋರಿಸುತ
ಆದರೂ ಬದುಕ ಆಚರಿಸುತ
ಅರಿವಾಗದಂತೆ
ಒಟ್ಟಿಗೆ ಎಲ್ಲ ಮುಂದಕೆ
ಸಾಗುತಲಿಹರೆಂದು  
=================================

19. ತಗಾದೆ
--------
ಸಾವಿರ ಸುಳ್ಳು ಹೇಳಿ
ಮಾಡುವೆ ಮಾಡು
ಎಂದು ಹಿರಿಯರು
ಅನುಭವದ ಬುನಾದಿಯಡಿ
ಗಾದೆ ಮಾಡಲು ಅರಿತರು.
 
ಒಂದೇ ಸುಳ್ಳು ಸಾಕು
ಆದ ಆ ಮಾಡುವೆ ಮುರಿಯಲು
ಎಂಬ ಮಹತ್ತರ ವಿಷಯವ
ಏಕೋ ಸೂಚಿಸಲು ಮರೆತರು!

=================================
20. ಕನ್ನಡ ಸಂಸ್ಕೃತ ಸಮೋಸಗಳು
-----------------------------------
ತಿಂದರೆ ಪಥ್ಯದ ಗತಿ ಏನು, ಮಾಡಿರುವ ಎಣ್ಣೆ ಎಂತಹುದೋ?
ತಿನ್ನದಿರೆ ನಾಲಿಗೆಯ ರುಚಿಗೇನು, ಚಪ್ಪರಿಸಲೇನಿಹುದು?
ಎನ್ನುತ್ತಲೇ ಕೊಂಚ ಗೊಂದಲದ ನಡುವೆಯೇ ತಿನ್ನುವುದು ದ್ವಂದ್ವ ಸಮೋಸ

ಅಂಗಡಿಯಾತ ಗರಂ ಆಗಿ ಬಿಸಿ ಬಿಸಿ ಎಣ್ಣೆಯಲಿ ಕರೆದು
ತಾಜಾ ತಿನಿಸುವಿನ ಕಂಪು ನಾಟಿ, ತಟ್ಟೆಯಲಿ ಹಾಕಿದ್ದ ಕಂಡು ಮನದಣಿದು,
ಕೊನೆಗೆ ಬಾಟ್ಲಿಯಲ್ಲಿ ಕೈ ಬೆರಳ ಹಾಕಿ
ಪಕ್ಕಕೆ ಬಡಿಸಿದ ಸಾಸನು ಕಂಡಾಗ - ಥತ್-ಪುರುಷ ಸಮೋಸ

ಒಂದು ತಿನ್ನಲೋ ಎರಡು ತಿನ್ನಲೋ, ಅಥವಾ ಒಂದ ತಿಂದು ಒಂದ ನಾಳೆಗಿಡಲೋ?
ಎನ್ನುತ್ತಲೇ ಮೂರ್ನಾಲ್ಕನ್ನು ಗುಳುಂ ಮಾಡಿದಾಗ - ಅಂಶಿ ಸಮೋಸ

ಮಾಡಲು ಕೆಲಸ ನೂರಿದ್ದು,
ಎಲ್ಲಿಂದ ಪ್ರಾರಂಭಿಸಲೆಂದು ಪರದಾಡುತ್ತಿದ್ದಾಗ
ಮೊದಲು ಒಂದು ಸಮೋಸ ತಿಂದು ನಂತರ ನಿರ್ಧರಿಸುವ
ಎಂದು ಒಂದ ನುಂಗುವುದು - ಕರ್ಮಧಾರೆಯ ಸಮೋಸ

=================================
21. ಕೋನ
-------
ಕಿರೀಟವೇನದು, ಪಾದರಕ್ಷೆಯೇನದು?  
ಕಿರೀಟವೇನದು, ಪಾದರಕ್ಷೆಯೇನದು?  
ತಾವಾಗಿಯೇ ಅವು ಏನೆ ಆಗಿರಲಿ
ಅನುದ್ವೇಗಿಯ ಕಣ್ಣುಗಳಿಗೆ
ಮಹಾರಾಜಾನೇ ಪಾದರಕ್ಷೆಗೆ ಕಿರೀಟ
ಕಿರೀಟದ ಪಾದರಕ್ಷೆಯೂ ಮಹಾರಾಜನೇ

=================================
22. ನಯನ ಮನೋಹರ
---------
ನನ್ನ ಕಣ್ಣೆದುರು ನಿನ್ನ ಪ್ರತಿಬಿಂಬ
ನಮ್ಮ ಪ್ರೀತಿ ಅಲ್ಲಿಂದ ಆರಂಭ
ರೆಪ್ಪೆ ಮುಚ್ಚಿರಲಿ , ಇಲ್ಲ ತೆರೆದಿರಲಿ ...
ನಿನ್ನ ಆ ಒಂದು ನೋಟ ನನ್ನ ಕಣ್ತುಂಬ

ಕಣ್ಗಪ್ಪೆ ಬೇಡದ ಕಣ್ರೆಪ್ಪೆ
ಕಮಲವೂ ಇಲ್ಲಿ ಬಲು ಸಪ್ಪೆ
ಅದರನ್ದಕೆ ಮನಸೋತರೆ  ನಾ
ಹೇಳು ಅದು ನನ್ನ ತಪ್ಪೇ?

ನಿನ್ನ ಕುಡಿ ನೋಟಕೆ ಕರಗಿದೆ ನಾನು
ನಿನ್ನ ಕಣ್ ಕಾಂತಿಗೆ ಸೊರಗಿದೆ ಬಾನು
ಬಣ್ಣಿಸಲೆಂತು, ಆ ಸೆಳೆವ ನೋಟ  
ಕಣ್ಣಲ್ಲೇ ನನ್ನ ಗೆದ್ದಿರುವೆ ನೀನು
=================================

23. ಓಲೈಕೆ
--------
ಕುಸುಮಬಾಲೆಯ ಮೌನರಾಗಕೆ ಹೇಗೆ ತರಲಿ ನಾ ಮದ್ದು?
ತಾನಸೇನನ ತಾಳದಾಚೆಗೆ ಹೊಮ್ಮಿ ಹರಿದ ಸರಹದ್ದು......
 
                    ಬೇರ್ಪಡದ ಕೆಂದುಟಿ, ಗುಳಿಯ ಸುಳಿಯಿರದ ಕೆನ್ನೆ;
                    ಪದ್ಮನಯನವ ಪಸರಿಸಿದ ಕಣ್ರೆಪ್ಪೆಯ ಕರಿ ಛಾಯೆ.
                    ಪ್ರತಿ ನೋಟದಲು ನನ್ನೆದೆಯ ನಾಟುವ ನಾಟಕೀಯ ಸನ್ನೆ,
                    ವಾಸ್ತವವಲ್ಲ ಗೆಳತಿ, ನಿನ್ನ ಕೋಪ ಬರಿ ಮಾಯೆ.

ಕುಸುಮಬಾಲೆಯ ಮೌನರಾಗಕೆ ಹೇಗೆ ತರಲಿ ನಾ ಮದ್ದು?
ತಾನಸೇನನ ತಾಳದಾಚೆಗೆ ಹೊಮ್ಮಿ ಹರಿದ ಸರಹದ್ದು......

                    ಮನದಾಳದ ಜಿಜ್ಞಾಸೆಯ ಮೀರಿ ಗೆಳತಿ, ನಕ್ಕುಬಿಡು ಒಮ್ಮೆ
                    ಸ್ಥಗಿತ ಸಹಸ್ರ ಭಾವಗಳನು ಹೊಂಬಣ್ಣದ  ಬಾನಿಗೊಡ್ಡಿ.
                    ಆ ಕಿರುನಗೆಯ ಹೊರಲು ಚೆಲುವಿನ ಮೊಗಕು ಬಲು ಹೆಮ್ಮೆ ,
                    ಕವಿದಿರುವ ಮೌನವನು ನೂಕಿ, ನಗಲು ನಿನಗೀನು ಅಡ್ಡಿ?

ಕುಸುಮಬಾಲೆಯ ಮೌನರಾಗಕೆ ಹೇಗೆ ತರಲಿ ನಾ ಮದ್ದು?
ತಾನಸೇನನ ತಾಳದಾಚೆಗೆ ಹೊಮ್ಮಿ ಹರಿದ ಸರಹದ್ದು...... 

=================================
24. ಅದೃಶ
------

ನಸುಕಿನ  ಕನಸಲಿ  ಮುಸುಕಿನ  ಮರೆಯಲಿ
ನಸುನಕ್ಕ  ಕಂಗಳ  ನಾಯೆಂತು  ಮರೆಯಲಿ?

    ಅರಸುತ  ಆ  ಕ್ಷೀಣ  ಪ್ರತಿಬಿಂಬ
    ಅದೆಸ್ಟೋ  ಕ್ಷಣಗಳು  ಯುಗಗಳಾದವು
    ಪ್ರತಿ  ವಿಫಲದಲು ಮತ್ತದೇ  ಜಂಭ
    ನೀ  ನನ್ನವಳು, ಕನಸಿನಲ್ಲಾದರೂ

ನಸುಕಿನ  ಕನಸಲಿ  ಮುಸುಕಿನ  ಮರೆಯಲಿ
ನಸುನಕ್ಕ  ಕಂಗಳ  ನಾಯೆಂತು  ಮರೆಯಲಿ?

    ಮನಸಲಿ  ಮಿಂಚಿದ  ಮುಂಗುರುಳು,
    ಮಾಸದ  ಅಪೂರ್ವ  ಪ್ರತಿಮೆ;
    ಒಮ್ಮೆಯಾದರು  ಬಾ  ಕಣ್ಣೆದುರು
    ಮಂದಹಾಸವೇ , ಆಹ್ಲಾದಿಸುವೆ.
   
ನಸುಕಿನ  ಕನಸಲಿ  ಮುಸುಕಿನ  ಮರೆಯಲಿ
ನಸುನಕ್ಕ  ಕಂಗಳ  ನಾಯೆಂತು  ಮರೆಯಲಿ?

=================================
25. ವಿಚಿತ್ರ
-------
ರತ್ನಗಿರಿ ಏರಿ ಅಂದು ನಾವು ಹೋದ ಆ ಹೈಕು
ಚಿಕ್ಕದ್ದಾದರೂ ವಿಶಿಷ್ಟ, ತಾಜಾ
ಅದರಂತೆಯೇ ಈ ಹೈಕು
=================================

26. ವಿವರಣೆ
---------
ನೀನಾಡಿದ ಯಾವ ಮಾತಿಗೂ
ನನಗೆ ವಿವರಣೆ ಬೇಕಿಲ್ಲ
ಆ ಸಂಭಾಷಣೆ ಹಳತಾದರೂ
ಅದರ ಆಶಯ ಒಳಿತು

ಆದರೆ ಆ ನಿನ್ನ ಮೌನಕೆ
ನನಗೆ ವಿವರಣೆ ಬೇಕಲ್ಲ?
ಮಾತಿಗೆ ಒಂದೋ ಎರಡೂ ಅರ್ಥ
ಮೌನಕ್ಕೆ ನೂರಾರು ಅಂತರಾರ್ಥ

ಹೇಳಿಬಿಡು ನಿನ್ನ ಮನದಾಳದ ಇಂಗಿತ
ಮಾತಿನ ಸರಪಳಿಯ ಹಾಕಿ
ತೇಲಿಬಿಡು ಮನದ ನೀರವತೆಯ ಅಂಕಿತ
ಮೌನದ ಬಳುವಳಿಯ ಬಿಸಾಕಿ
=================================

27. ನನಸು
--------
ನಿನ್ನೊಡನೆ ಕಳೆದ ಆ ಕ್ಷಣಗಳು
ಬರಿ ನೆನಪೆಲ್ಲ
ಸ್ಮೃತಿ ಪಟಲದಲಿ ಅಚ್ಚಾದ
ಹಚ್ಚ ಹಸಿರ ಒಲವಿನ ಕುರುಹು  

ನಿನ್ನೊಡನೆ ಆಡಿದ ಮಾತುಗಳು
ಬರಿ ವಿಚಾರವಲ್ಲ
ಮನಸು ಮನಸಿನ ನಡುವಿನ
ಮಧುರ ಭಾವ ವಿನಿಮಯ  

ನಿನ್ನೊಡಗೂಡಿ ನಕ್ಕ ಆ ಘಳಿಗೆ
ವಿನೋದಕ್ಕೆ ಸಿಕ್ಕ ಉತ್ತರವಲ್ಲ
ನಮ್ಮಿಬ್ಬರ ಮಾನಸ ತರಂಗ
ಉಕ್ಕಿ ಒಂದಾಗಿ ಹರಿದ ಮಾಯೆ

ಮರೆಯಲಿ ಹೇಗೆ, ಇದಾವುದನ್ನು?
ಮರೆಯದಂತೆ ಬೆರೆತಿಹುದಲ್ಲ
ಕಣ್ಣು ಮುಚ್ಚಿ ಕುಳಿತಾಗಲೆಲ್ಲ  
ಮನದ ಪರದೆಯ ಬೆಳಗುವುದಲ್ಲ
 
=================================
28. ಕಡಲ ತೀರದಿ ನಿನ್ನೊಡನೆ
---------------------------
ಕಡಲ ತೀರದಿ ನಿನ್ನೊಡನೆ ಕುಳಿತು
ದೂರದ ಬೆಟ್ಟದ ಹಿಂದೆ ಅಡಗಿ
ಹೊರಬಂದು ಕೆಂಪ ಚೆಲ್ಲಿದ
ಮುಂಜಾನೆ ಸೂರ್ಯನ ನೋಡುವಾಸೆ

ಕಡಲ ತೀರದಿ ನಿನ್ನೊಡನೆ ಕೂಡಿ
ಮಂಡಿ ತನಕ ನೀರಿಗಿಳಿದು
ಅಲೆಗೆ ಕಾಲಿನಡಿಯ ಮರಳು ಜಾರಿ
ಜೊತೆಗೇ ತೇಲಿ ಹೋಗುವಾಸೆ  

ಕಡಲ ತೀರದಿ ನಿನ್ನೊಡನೆ ಕಲೆತು
ಮರಳಲಿ ಇಬ್ಬರ ಹೆಸರ ಕೊರೆದು
ಅಲೆಯು ಅಪ್ಪಳಿಸಿ ಅಳಿಸಿ ಹೋಗೂ
ಮತ್ತೆ ಮತ್ತೆ ಅದನ್ನೇ ಬರೆಯುವಾಸೆ

ಕಡಲ ತೀರದಿ ನಿನ್ನೊಡನೆ ಕುಳಿತು
ಸಂಜೆ ಸೂರ್ಯನ ಬೂದು ಬೆಳಕಳಿ
ದೂರದ ಹಡಗು
ಕಾಣದಷ್ಟು ದೂರ ಹೋಗುವುದ ಕಾಣುವಾಸೆ

ಕಡಲ ತೀರಿದಿ ನಿನ್ನೊಡನೆ ಮಲಗಿ
ಮರಳ ದಿಂಬಿಗೆ ತಲೆಯಿಟ್ಟು
ಕಪ್ಪು ಆಗಸದತ್ತ ಕೈಯಿಟ್ಟು  
ಅಸಂಖ್ಯ ತಾರೆಗಳ ಎಣಿಸುವಾಸೆ

=================================
29. ಹಂಬಲ
---------
ಸೂಜಿ ಚೂಪಾದ
ಜಸೂರ್ ಹಣಿಗೆಯೂ  
ಬೇಧಿಸದಷ್ಟು ದಟ್ಟವಾದ
ಕಪ್ಪಾಗಿ ಹೊಳೆವ
ಅವನ ಕೇಶದಲಿ ಕೈಬೆರಳ
ಆಡಿಸುವಾಸೆ...
ಗಾಢವಾಗಿ ಬೆಳೆದು
ಸೊಂಪಾಗಿ ಹರಡಿದ
ಆ ಕೂದಲ ಕೆದರಿ
ಮತ್ತೆ ಬೈತಲೆ ತೆಗೆಯುವಾಸೆ..

=================================
30. ಸಲಹೆ
------
ಬದುಕಿಗೆ ಬೇಕಾದ
ಅತಿ ಆಳದ ಸಲಹೆಗಳು
ಶ್ರೇಷ್ಠ ಉದ್ದಾಮ ಕಾವ್ಯಗಳಲ್ಲಾಗಲಿ
ಪುರಾತನ ಮಹಾನ್ ಗ್ರಂಥಗಳಲ್ಲಾಗಲಿ
ಅಪ್ರತಿಮ ಪ್ರೇಮ ಕಾದಂಬರಿಗಳಲ್ಲಾಗಲಿ
ನನಗೆ ಸಿಕ್ಕಿರುವುದಕ್ಕಿಂತ  
ಆಟೋ ಲಾರಿಗಳ ಹಿಂದೆ
ದಕ್ಕಿರುವುದೇ ಹೆಚ್ಚು

=================================
31. ಪಕ್ಷಪಾತ
=====
ಬಹಳಾಯ್ತು ಬೆಳದಿಂಗಳ ಬಗೆಗಿನ ಭಾವಾವಲೋಕನ
ಪೂರ್ಣಿಮೆಯ ಪೂರ್ಣತೆಗೆ ಒಲವಿನ ಉಪಮೆ, ಕವನ.

ನಿದರ್ಶಿಸಲು ನೆಪಕ್ಕಾದರೂ ಎಲ್ಲೂ ನನ್ನ ಸುಳಿವಿಲ್ಲ
ಪ್ರದರ್ಶಿಸಲು ಹಾಲ್ನೊರೆಯ ಬಣ್ಣ ನನ್ನ ಬಳಿಯಿಲ್ಲ.

ಕವಿಗಳ ವರ್ಣ ಬೇಧ ನೀತಿಗೆ ಇರಲೊಂದು ಧಿಕ್ಕಾರ
ಇಂತಿ ನಿಮ್ಮ ಅಮಾವಾಸ್ಯ; ನೊಂದಿಹೆನು, ಮನಭಾರ.

=================================
32. ಸಿಂಧುಜ
======
ನೆನಪುಗಳ ಬಿರುಗಾಳಿಗೆ ಸಿಲುಕಿ
ಕಡಲ ನಡುವಲ್ಲಿ ಬಡವಾದ ಹಡಗಿನ
ಮೇರು ಕಂಭದ ಮೇಲೆ
ದಿಕ್ಕು ದಿಶೆಯಿಲ್ಲದೆ
ಹಾರುವ ಪತಾಕೆಯಂತಾಗಿದ್ದ  
ನನ್ನ ಬದುಕಲ್ಲಿ ...
ಮುಂಜಾವಿನ ರವಿಯ ಮೊದಲ ಸ್ಪರ್ಶಕೆ
ನಾಚಿ ನಲುಗುವ ತಂಗಾಳಿಯಾಗಿ ಬೀಸಿದ
ನೀನು ...
ನನ್ನ ಸಂತಸದ ಸಿಂಧುಜ
=================================

33. ನಾನಲ್ಲ
========
ನಾ ಕವಿಯಲ್ಲ
ನಿನ್ನ
ಮೃದುಲವದನದ
ಕಮಲನಯನದ
ವಿಮಲಕಾಂತಿಯ
ವರ್ಣಿಸಲೆಂದೇ
ನಾನಾದೆ ಕವಿಯು

ನಾ ಶಿಲ್ಪಿಯಲ್ಲ
ನಿನ್ನ
ತರುಲತೆಯ ನಾಚಿಸುವ
ಗೋಧೂಳಿಯ ಜ್ಞಾಪಿಸುವ
ಮೈಮಾಟವ ಮನದಲ್ಲಿ
ಕೆತ್ತಲೆಂದೇ
ನಾನಾದೆ ಶಿಲ್ಪಿಯು

ನಾ ಅರಸನಲ್ಲ
ನಿನ್ನ
ಗುರಿಯಿಲ್ಲದೆ ಅರಸುತ್ತ
ಬೆರಗಾಗಿ ನಿನ್ನ ಕಂಡಾಗ
ಹೃದಯ ಸಿಂಹಾಸನದೊಳು
ರಾಣಿಯಾಗಿಸಲೆಂದೇ
ನಾನಾದೆ ಅರಸನು

ನಾ ಆಸ್ತಿಕನಲ್ಲ
ನಿನ್ನ
ಮನದ ಗುಡಿಯೊಳಗಿಟ್ಟು
ನವರಸದ ನೈವೇದ್ಯವನಿತ್ತು
ದೇವತೆಯಂತೆ  ಪೂಜಿಸಲೆಂದೇ
ನಾನಾದೆ ಭಕ್ತನು...

=================================
34. ರಂಗವಲ್ಲಿ
-----------
ನನ್ನ ಮನದಂಗಳ
ಶುಚಿಯಿಲ್ಲವೆಂದು ದೂರಿ
ನನ್ನಿಂದ ನೀ ದೂರ ಸರಿದೆಯಲ್ಲ?
ಒಮ್ಮೆಯಾದರೂ ನನ್ನ ಕೇಳಬೇಕಿತ್ತು...
ನನ್ನ ಮನದಂಗಳದಿ ನೀ ಬಿಡಿಸಿದ
ಸುಂದರವಾದ, ಬಣ್ಣದ ರಂಗವಲ್ಲಿ
ಅಳಿಸಿ ಹೋಗಬಾರದೆಂದೇ
ನಾನೆಷ್ಟೋ ದಿನದಿಂದ
ಮನದಂಗಳವ
ಗುಡಿಸಿ, ಸಾರಿಸಿ, ಒರೆಸದೆ
ನಿನಗಾಗಿ ಕಾಯುತಲಿದ್ದೆ...

=================================
35. ಶಾಖ
-----
ಮಾರ್ಘಶೀರದ ಛಳಿಯ
ತಡೆಯಲಾರದೆ
ಮನೆಗೆ ಹಾಕಿಸಿದ ಹೀಟರ್
ಅವತ್ತೇನೋ ಕೊಟ್ಟಿತು
ಬೆಚ್ಚಗಿನ ಶಾಖ
ಆದರೆ ತಿಂಗಳಲಿ ಬಂದ
ಕರೆಂಟ್ ಬಿಲ್ಲಲ್ಲಿ ಇದ್ದಿದ್ದು
ನಿಜವಾದ ಶಾಕ  

=================================
36. ಮನೆಯಾಕೆ
========
ಬಂಗಲೆಯಂತಿದ್ದರೂ,
ನಗೆ ಹರುಷದ ಸುಳಿವಿಲ್ಲದ
ತೋರಣ ರಂಗೋಲಿಯ
ಕಳೆಯಿಲ್ಲದ ಮನೆಯಾಕೆ?
ಗುಡಿಸಿಲಂತಿದ್ದರೂ,
ನಲಿವು, ಒಲವನು ಚೆಲ್ಲಿ
ಚೆಲುವಾಗಿ ಬೆಳಗಿಸಿದಾಳು
ಅದರ ಮನೆಯಾಕೆ  

=================================
37. ಮೇಲುಜಾತಿ
========
ಕೂತು ಕೈಯ್ಯಾರೆ ಬರೆವ
ಬರೆದು ಅಂಚೆಗೆ ಹಾಕುವ
ಚೆನ್ನಾದ ಪತ್ರ ವ್ಯವಹಾರವ
ಎಷ್ಟು ಕೀಳಾಗಿ ಕಾಣುವರು ಇವರು
ಈ-ಮೇಲ್ ಜಾತಿಯವರು!

=================================
38. ಶಿವರಾತ್ರಿ  
___
ಶಿವರಾತ್ರಿಯಂದು ನಿಟ್ಟುಪವಾಸ  
ರಾತ್ರಿ ಪೂರಾ ಭಕ್ತಿ,, ಭಜನೆ, ಜಾಗರಣೆ  
ಆರು ತಿಂಗಳ ಬಳಿಕ ಭಾದ್ರ ಮಾಸ  
ಗಣಪತಿ ಹಬ್ಬದಂದು ಸಂಭ್ರಮಾಚರಣೆ  
ಮೃಷ್ಟಾನ್ನ ಭೋಜನ, ಕಡುಬು ವಿತರಣೆ  
ಭಹುಷಹ ತಾನು ಎಲ್ಲ ಕಷ್ಟ ನುಂಗಿ  
ಮಕ್ಕಳಿಗೆ ಸರ್ವ ಸುಖ ಕರುಣಿಸಿದ  
ಎಲ್ಲ ಅಪ್ಪಂದಿರ ಸಾಲಿನ ಮೊದಲ ಅಪ್ಪ  
ನಮ್ಮ ಶಿವಪ್ಪ   

=================================
39. ಸಂಯೋಜನೆ
---------------
ಮುಗುಳ್ನಗೆಯ ರಾಚುವ
ನಿನ್ನ ಮೋಹಕ ಮುಖವ ನೋಡುತ,
ಸವಿನಗೆಯ ಚಾಚುತ
ನೀನಾಡುವ ಸಿಹಿ ಮಾತ
ಕೇಳುವ ಅನುಭವ...
ರವಿಚಂದ್ರನ್ ಸಿನಿಮಾದ
ಹಂಸಲೇಖ ಹಾಡಿನಂತೆ
ದೃಶ್ಯ, ಶ್ರವ್ಯ
ಎರಡೂ ಭವ್ಯ  

=================================
40. ಕಡಲಾಳ
----------------------
ನನ್ನ ಮನದಾಳವ ಹೊಕ್ಕ ಬಿರು ಮಾತಿಲ್ಲ
ಕಡಲಾಳವ ಹೊಕ್ಕ ರವಿಯ ಕಿರಣವಿಲ್ಲ
ಕಗ್ಗತ್ತಲಲಿ ಕಾಣದ ಆಳದ ಜೀವಿಗಳಂತೆ
ಚಪ್ಪಟೆಯ ಭಾವಗಳು ಅವಿತಿಹವು ಮನದಿ
 
ಹಿಡಿಯಲೋ, ಒಡಲೋ, ನಡುಸಮುದ್ರ ಜೀವಿ  
ಆಗ್ಗಾಗ್ಗೆ ತಾನ್ ಹೊಳೆದು ತೇಲ್ವ ರೀತಿಯಲಿ
ಒಡಲಾಳದ ರಾಗವದು ಸೂಸುತಿದೆ ಬೆಳಕ
ತಡೆಯಲಾಗದೆ ತನ್ನೊಳಗಿನಾ ತೀವ್ರ ತವಕ  

ಕೋಟಿ ವರುಷವಾಯಿತು, ಇನ್ನು ಮೇಲೇರುವ ಗತಿಯಿರದು
ಕಡಲಾಳದ ಜೀವಿಗಳವು ಅಲ್ಲೇ ಬೆರೆತಿಹವು
ಸ್ಮರಣಾತೀತ ಕಾಲವಾಯಿತು, ಹೊರಚಿಮ್ಮುವ ಸ್ಥಿತಿಯಿರದು
ಒಡಲಾಳದ ಭಾವಗಳಿವು ಇಲ್ಲೇ ಅಡಗಿಹವು

ಕೇಳದಿರು ಎನ್ನ ನಾ ಹೀಗೇಕೆಂದು, ನನ್ನ
ಒಡಲಾಳ ತಲುಪಿದ ಜಲಾಂತರ್ಗಾಮಿ ಇಲ್ಲ
ಮೇಲೆದ್ದು ಸಿಡಿದು ಹೊರಚೆಲ್ಲಲು ರಸಭಾವ
ತಾ ಬಿಡನೆಂದು ನನ್ನೊಳಗಿನ ಮಂದಗಾಮಿ ಬಲ್ಲ

=================================
41. ಘಳಿಗೆ
---------
ಕಟ್ಟಿದಾ ಮನೆ,
ಹುಟ್ಟಿದಾ ಮಗು,
ಕಟ್ಟಿದಾ ಕಾವ್ಯ,
ಬರ್ಪೆ ಇವುಗಳಿಗೆ
ಹೆಸರಿರ್ಪ ಘಳಿಗೆ
ಎಂದಿನದಲ್ಲವದು,
ಅಮೃತ ಘಳಿಗೆ

=================================
42. ಮಾನಸ ತರಂಗಿಣಿ
--------------------
ಮೌನದಿ ಹರಿವ ಎನ್ನ ಅಂತರಂಗದ ಹೊನಲು
ಸಾಗುವ ದಿಸೆ ಬಗೆಗೆನಗೆ ಇನ್ನಿರದ ತಳಮಳ
ಆಚೆ ತೀರದ ಊರು ಹಚ್ಚ ಹಸಿರೋ, ಬಯಲು
ಬಯಲಾಗುವುದದು ತಡವಾಗಿ ಬಹಳ  

ಕ್ಷಣಕೊಂದು ತಿರುವು, ಹರಿವಿನುದ್ದಕು ಕವಲು
ಜಕ್ಕುಳಿಸಲು ಸದಾ ಹಾತೊರೆಯುವ ಮನವು
ಆಗ್ಗಾಗ್ಗೆ ಅತಿಯಾದ ಸಂದಿಗ್ಧ ಹರಿಬರಲು
ಜಲಪಾತದಿ ಧುಮುಕಿತಾ ಮನೋಚೇತನವು    

ನದಿಯ ದಾರಿಯೇ ಹೀಗೆ, ನೂರಾರು ಸಂಧಿಪರು
ಕ್ಷಣಕೋ, ನಿಮಿಷಕೋ, ವಸಂತಕೋ, ವರುಶಕೋ
ಮಾನಸ ತರಂಗಿಣಿಯೂ ಅಂತೆಯೇ ಹರಿದು ಬರು
ನಡುವೆ ಸಿಕ್ಕ ಮುಖಗಳ ಬಿಕ್ಕಿ ಅಳುವುದೇಕೋ?

ನದಿಮೂಲ ಅತಿ ಶುಭ್ರ, ಹರಿದಂತೆ ಬಿರಿ ಛಿದ್ರ  
ಹೆಗ್ಗಡಲ ಅಪ್ಪುವವರೆಗೂ ಶೋಷಿಸುವರೆಲ್ಲ
ಬಿಡದು ಆದರೂ ಪರಿಚೆ, ಬಿಡದು ನದಿ ಮಂದ್ರ
ಮನದ ನದಿ ತಾನ್ ಇಂತು ಪಯಣಿಸುವುದಲ್ಲ

=================================
43. ದಾರಿಹೋಕ
-------------
ಹಳ್ಳಿಯಿಂದ ಹಳ್ಳಿಗೆ ಪಯಣಿಸಿ,
ಬೇಡುತ ತಿಂದು,
ಆಲದ ಮರದಡಿ ಮಲಗಿ
ಮತ್ತೆ ಕಾಣದಂತೆ ಮಗದೆಲ್ಲೋ
ಹೋಗುವ ಅವನನ್ನು
ದಾರಿಹೋಕ ಎಂದೆಯ?
ನೆನ್ನೆಯ ಖೇದವಿರದೆ
ನಾಳೆಯ ಸೆಡೆಯಿರದೆ
ಮೆರುಗಿರದೆ ಕೊರಗಿರದೆ,
ಪಯಣಿಸುವ ಯೋಗಿ
ಆತ ಸ್ವರ್ಗದ ದಾರಿಯ ಹೋಕ

=================================
44. ಅಭಿಮನ್ಯು
---------------
ಹೊರಹೋಗುವ ದಾರಿ ಗೊತ್ತಿರದೆಯೂ
ಬಾಳ ಚಕ್ರವ್ಯೂಹವ ಪ್ರವೇಶಿಸಿ
ಎಣೆಯಿಲ್ಲದೆ ಅರಿಷಡ್ವರ್ಗಗಳ ಸೆಣೆಸಿ
ಮುಕ್ತರಾಗುವ ದಾರಿ ಕಾಣದೆ
ಕೊನೆಗೆ ಇಲ್ಲೇ ಹೋರಾಡಿ ಮಣಿಯುವ
ನಾವೆಲ್ಲರೂ ಅಭಿಮನ್ಯುಗಳೇ

=================================
45. ವಿವಾಹದ ವಿಚಾರ
--------------------
ತ್ರೇತಾ ದ್ವಾಪರದ
ಸ್ವಯಂವರದಿಂದ
ವಿವಾಹದಾಚಾರ  
ಕಲಿಯುಗದವರ  
ವರದಕ್ಷಿಣೆವರೆಗೆ
ಕ್ಷಯಿಸಿದ್ದು ಹೇಗೆ?

=================================
46. ಪದಬಂಧ
-----------
ಬಾಳೇ ಪದಬಂಧ...

ತಿಳಿಯದಾ ಸುಳುಹುಗಳು
ಕೆಳಗಿಂದ ಮೇಲೆಳೆಸಿ
ಎಡದಿಂದ ಬಲಕಲೆಸಿ  
ಹೊಳೆಯದಾ ಉತ್ತರವ
ಎಡೆಬಿಡದೆ ನಾವರಸಿ

ಬಾಳೇ ಪದಬಂಧ...

ಒಂದೇವೊಂದು ಪದವಾಚೆ
ಈಚೆ ಆಗುವಂತಿಲ್ಲ
ಹತ್ತಾರು ಉತ್ತರ ತಪ್ಪಿ
ಚಿತ್ತಾರ ಕೆದರುವುದಲ್ಲ

ಬಾಳೇ ಪದಬಂಧ...

ಒಂದೊಂದೇ ಸುಳುವಿನಾ
ಒಳಹೊಕ್ಕು ತುಂಡರಿಸಿ
ಸಿಕ್ಕ ಚಿಕ್ಕ ಉತ್ತರವ
ಮುಂದಿಟ್ಟು ಮಿಲಾಯಿಸಿ
ಜೋಡಿಸಿ ಕೂಡಿಸಿ
ಹಾಳೆಯಲಿ ಮೂಡಿಸಿರೆ
ನಿಮಿರುವುದು ಚೆಲುವಾದ  
ಬಾಳ ಪದಬಂಧ

=================================
47. ಕವಿತೆ
------
ಅರ್ಥವಾಗದ ಕವಿತೆ ರಚಿಸುವುದು ಸುಲಭ
ಮಹಾಮೇಧಾವಿ ಪಟ್ಟ ಕವಿಗದರ ಲಾಭ

ಕೇಳಿರದ ತಿಳಿದಿರದ ಪದಗಳ ಬಳಸಿ
ಸಾಲುಗಳ ಹೆಣೆದೆಣೆದು ಕವಿತೆಯ ಬೆಳೆಸಿ  
ಪ್ರತಿ ಸಾಲ ಅಂಚಲ್ಲೂ ಇರಲಿ ಪ್ರಾಸ
ಪ್ರಾಸಪ್ರಿಯರಲಿ ಮೂಡಿಸಲು ಮಂದಹಾಸ

ಅರ್ಥವಾಗದ ಕವಿತೆ ರಚಿಸುವುದು ಸುಲಭ
ಮಹಾಮೇಧಾವಿ ಪಟ್ಟ ಕವಿಗದರ ಲಾಭ

ತೆರೆದ ತುದಿಯ ಕವಿತೆ ಮುಗಿಸಿ ಸಹಿಯನೊಂದು ಮಾಡಿ
ಅರ್ಥ ಆಶಯನೆಲ್ಲವನು ವ್ಯಾಖ್ಯಾನಕಾರರಿಗೆ ಬಿಡಿ
ಸರ್ಕಾರ ವ್ಯವಸ್ಥೆಯನೂ ಸ್ವಲ್ಪ ಜರಿಯಬಹುದಾ ನೋಡಿ
ಸಂಸ್ಥೆಗಳೂ ಅಭಿನಂದಿಸುವುವು ಪ್ರಶಸ್ತಿಗಳ ನೀಡಿ  

ಅರ್ಥವಾಗದ ಕವಿತೆ ರಚಿಸುವುದು ಸುಲಭ
ಮಹಾಮೇಧಾವಿ ಪಟ್ಟ ಕವಿಗದರ ಲಾಭ
 
=================================
48. ವಾಸ್ತವ
-----
ಠೀವಿಯಿಂ ಹಾರುವ ಹಕ್ಕಿಯದು ತಾ
ಜೋಡಿಯ ಹಕ್ಕಿಗೆ ಹಂಬಲಿಸದೆ
ಉದ್ದಕೆ ರೆಕ್ಕೆಯ ಹಿರಿದಾಗಿ ಚಾಚಿ
ತೇಲುವ ಮೋಡವ ಅಟ್ಟಿಸಿ ಸಾಗೆ
ಸಿಕ್ಕೀತೆ ತನ್ನೊಲವು ಜನುಮದಿ ಅದಕೆ?

=================================
49. ಯುಗ ಮಾನಸ
-----------------
ಕೆದಕಿದಾ ಜ್ವಾಲೆ ಸಿಗದಂತದು ಉರಿಯೆ
ಹುದುಗಿದ ಅರ್ಥವದು ಕಂಡರೂ ತಿಳಿಯೆ
ಜನಮಾನಸದಿ ತುಳಿದಿದ್ದ ಆ ತೆಳು ಎಳೆಯೇ  
ಯುಗಮಾನಸದಿ ಬೆಳೆದೆದ್ದ ಸುಡುಗಾಯ ಬರೆಯೆ

ಕಳ್ಳ ಕಣ್ಣು ಮುಚ್ಚಿಲ್ಲ, ಕಂಡರೂ ಕಾಣದಂತೆ ಕುರುಡಾಗೆ ಹೋಗಿದೆ
ಹಳ್ಳದ ತಿಳಿನೀರು ಕುಡಿದಷ್ಟೂ ಏಕೋ ಅವರ ದಾಹವದು ನೀಗದೆ  
ಆರಿಸದ ದಳ್ಳುರಿಯ ಕೊಳ್ಳಿಯದು ನಡುಬೀದಿಯಲಿ ಸಾಗಿದೆ  
ಪಕ್ಕದ ಕೆಸರಲಿ ಅರಳಿದ ಹೂವಿನ ಪಕಳೆ ಹಗಲಲೇ ಬಾಡಿದೆ  

ಅಗ್ನಿ ಶಾಮಕ ಸುಡುವ ಬೆಂಕಿಯನು ತಣಿಸೆ
ಜನಮಾನಸದಿ ಹಚ್ಚಿದ ಕಿಚ್ಚನಾರು ಮಣಿಸೆ?
ಬಣ್ಣಿಸಲಾತೀತ ಅದರ ಪ್ರಖರತೆಯ ಕಡುಹು
ಯುಗಮಾನಸದಿ ಕರೆತಂದ ಪರಿವರ್ತನೆಯ ಕುರುಹು

 =================================

50. ಮುಳ್ಳು
--------
ಚುಚ್ಚಿದರೆ ಅತಿಹೆಚ್ಚು
ನೋಯಿಸುವ ಮುಳ್ಳು
ಕಣ್ಣಪ್ಪನ ಕಾಡಿನಲಿಲ್ಲ
ನಿಬಿಡಾದ ಬೀಡಿನಲಿಲ್ಲ

ಬೇಕಿದ್ದಾಗೆಷ್ಟು ಬೇಡಿದರೂ ನಿಲ್ಲದ
ಸಾಕೆಂದಾಗ ಯಾಚಿಸಿದರೂ ಓಡದ
ಗಡಿಯಾರದಲ್ಲಿವೆ

=================================
51. ಬಾಳಗೀತೆ
-------------
ನನ್ನ ಬಾಲ್ಯ ಜಾನಪದ ಗೀತೆ
ಸುತ್ತ ಮುತ್ತಲೆಲ್ಲರೆನ್ನ
ಲಿಪಿಯಿರದ ಸುಲಲಿತ
ಗಾನದಂತೆ ಆಡಿಸಿ ಪಾಡಿಸಿ
ಎತ್ತಿ ಮುದ್ದಾಡಿಬಿಟ್ಟರೆಲ್ಲ

ತಾರುಣ್ಯ ಪ್ರಬಲ ಭಾವ ಗೀತೆ
ಮನದಿ ಕುದಿವ ನೂರು ರಾಗ
ಆಗೊಮ್ಮೆ ನಗು ಮತ್ತೆ ಉದ್ವೇಗ
ಪ್ರತಿ ಚರಣವೂ ಪ್ರಾಯದ
ಅಪೂರ್ವ, ಅಪೂರ್ಣ ಭಾಗ  

ನಡುವ ಪಯಣ ಚಿತ್ರಗೀತೆ
ನನ್ನವರೊಂದಿಗೆ ಮಿಡಿಯುತ  
ಎದ್ದಾಗ ಕುಣಿದು ಆಚರಿಸುತಾ
ಬಿದ್ದಾಗ ಮಣಿದು ಚಡಪಡಿಸುತಾ
ನರ್ತಿಸಿದೆ ಸಂಗೀತ ಚಪ್ಪರಿಸುತಾ      

ಮುಪ್ಪು ಶಾಂತ ಭಕ್ತಿ ಗೀತೆ
ಮೇಲ್ಶಕ್ತಿಯ ನೆನೆಯುತ
ಚರಣ ಮರೆತು ಪಲ್ಲವಿಯನೆ
ಬಾರಿ ಬಾರಿ ಹಾಡುತ
ಕಣ್ಣು ಮುಚ್ಚಿ ನಮಿಸುತಾ
 
=================================
52. ಬೆಲೆ
-----
ಕಲೆಗೆ ಈಗೆಲ್ಲ ಬೆಲೆಯಿಲ್ಲ
ಎಂಬುದ ನಾ ಒಪ್ಪೋಲ್ಲ
ಅದು ಆಳವಾದರೆ ಸಾಕು
ಅದಕೆ ತನ್ನದೇ ಮೌಲ್ಯ, ಛಾಪು  

ಶುಭ್ರ ಶ್ವೇತ ವಸ್ತ್ರದ ಮೇಲೆ
ಆದ ಕಾಫಿ ಕಲೆಯ ಬೆಲೆ  
ತಿಳಿದದ್ದು ಚೋಕ್ತಗೊಳಿಸಲಾಗದೆ
ವಸ್ತ್ರವನೇ ಎಸೆದ ಮೇಲೆ

ಹಬ್ಬಕ್ಕೆ ಕೊಂಡ ಹೊಸ ಬಟ್ಟೆಯ ಮೇಲೆ
ಅರಿಯದ, ತಿಂಗಳ ಮಗು
ತನ್ನ ಕಲೆ ಮಾಡಿಯೂ ನನಗೆ
ಕೋಪ ಬರದೆ ನಕ್ಕು ಆಡಿಸಿದಾಗ  
ಗೊತ್ತಾದದ್ದು ಅದರ ಬೆಲೆ

ಅಂಗಿಯ ಸ್ವಚ್ಛ ಕಾಲ್ಲರ್ ಮೇಲೆ
ಅಂಟಿದ ಪ್ರೇಯಸಿಯ ಲಿಪ್ಪು ಸ್ಟಿಕ್ಕಿನ
ರಣ ಕೆಂಪು ಕಲೆಯ ಬೆಲೆ ತಿಳಿಯುವುದು
ಅದು ಹೆಂಡತಿಯ ಕೈಗೆ ಸಿಕ್ಕಿದ ಮೇಲೆ

ಮತಗಟ್ಟೆಯಲಿ ಗುಂಡಿ ಒತ್ತಿ
ಬೆರಳ ಮೇಲೆ ಲೇಪಿಸಿಕೊಂಡ
ಕಲೆಯ ಬೆಲೆ ನೆನಪಾಗುವುದು
ಸರ್ಕಾರ ಹೊರಬಂದ ಮೇಲೆ

ಭ್ರಷ್ಟ ಮಂತ್ರಿಯ ಲೋಭಕೆ
ಬಲಿಯಾಗಿ ಪ್ರಾಣ ತೆತ್ತ ಜನರ
ರಕ್ತದ ಕಲೆಯ ಬೆಲೆಯ  
ಅರಿವು ತನ್ನ ಕುರ್ಚಿ ಬಿದ್ದ ಮೇಲೆ
 
=================================
53. ಪ್ರಾಸ
-----
ನಿನ್ನ ಕವನದಲಿ ಪ್ರಾಸವೇ ಇಲ್ಲವಲ್ಲೋ ಮಾರಾಯ ಅನ್ನೋ ಜನಕ
ಇದೋ ಒಂದು ಪ್ರಾಸಬದ್ಧ ಕವನ, ಅರ್ಥ ಮಾತ್ರ ಸಿಗದು ಅಂಜನಕ

ಕರೋನ ಬಂತೆಂದರೆ ಕೂಡಲೇ ಬೇಕು ಆಮ್ಲಜನಕ
ಇಲ್ಲದಿದ್ದರೆ ಕೆಲವೇ ಘಳಿಗೆಯಲಿ ಸ್ಥಿತಿ ಚಿಂತಾಜನಕ
ಅಂತೂ ಬಂತು ವೈರಾಣುವಿನೆದುರಿಸಲು ಪ್ರತಿಜನಕ
ಪವಾಡದಿ ಭುವಿಯಲಿ ಸೀತೆಯನು ಪಡೆದಂತೆ ಜನಕ

=================================
54. ಕವನ ವನ
========
ಹಾಗೆ ಅಂದು ಹಾದು ಹೋಗೋವಾಗ
ಕಂಡೆ ಆ ವನವ, ಕವನ ವನವ
ವಿಶಾಲವಾಗಿ ಹರಡಿದ್ದ ಹರಿಸಾದ ಬನವ
ಕನ್ನಡದ ಕವಿಗಳ ಕವನದ ವನವ

ತುಂಗಾಜಲ ಹೀರಿ ರಾಮನ ಕೃಪದಿಂದ
ಬಂದವರ ಸ್ವಾಗತಿಸುತ
ಚಂದಾಗಿ ಬೆಳೆದಿದ್ದ ಕವನದ ಮರವ
ಗಂಗಾವತಾರಣದ ಗರಿ ಏರಿ ಬೆಳೆದು
ತಂಪೆಸೆದು ಹರಡಿದ್ದ ಮತ್ತೊಂದು ಮರವ
ಹಾಗೆ ಅಂದು ಹಾದು ಹೋಗೋವಾಗ
ಕಂಡೆ ಆ ವನವ, ಕವನ ವನವ

ದೇವರ ರುಜುವಿಗೆ ಸಾಕ್ಷಿಯೇನೋ ಎಂಬಂತೆ
ನೂರಾರು ಪಕ್ಷಿಗಳು ಮನೆಮಾಡಿದ್ದ ಮರವ
ಸಹ್ಯಾದ್ರಿಯ ಬಾಚುವ ದಿಗಂತದ ಹಿನ್ನೆಲೆಯಲ್ಲಿ
ನಿತ್ಯೋತ್ಸವ ಹಾಡುತಿದ್ದ ಮಗದೊಂದು ಮರವ  
ಭಾವಾಂತರಂಗದಿ ಮಿಂದು, ಇರುವುದ ಬಿಡದೆ
ಭದ್ರವಾಗಿ ಬೇರೂರಿದ್ದ ಬೇರೊಂದು ಮರವ
ಹಾಗೆ ಅಂದು ಹಾದು ಹೋಗೋವಾಗ
ಕಂಡೆ ಆ ವನವ, ಕವನ ವನವ

ಕಗ್ಗಂಟಿನ ಬಾಳಿಗೆ, ಕಗ್ಗಂಟಿನ ಬದುಕಿಗೆ
ಮಂಕಾಗದೆ ಚಾಚಿದ್ದ ಬೃಹದೊಂದು ಮರವ
ದೇವಶಿಲ್ಪಿ ಕೆತ್ತಿದಂತೆ ಚೆಲುವಾದ, ಒಲವಾದ
ಮನೋರಮಣೀಯವಾದ ಮತ್ತೊಂದು ಮರವ  

ಮುಂದೆಷ್ಟೇ ಹೋದಷ್ಟು ಮುಗಿಯದೆ ಇರುವಷ್ಟು
ಹಿರಿದಾದ ಚೆಲುವಾದ ಹರಿಸು ವನವ
ದಣಿದ ಮನಸಿಗೆ ನೆರಳಾಗಿ ನಿಲ್ಲುವ
ನೂರಾರು ಮರಗಳ ಕವನ ವನವ  
ಹಾಗೆ ಅಂದು ಹಾದು ಹೋಗೋವಾಗ
ಕಂಡೆ ಆ ವನವ, ಕವನ ವನವ.

=================================

55. ಅಂತಾಕ್ಷರಿ
======
ಕೆಲವು ಕವಿತೆಗಳ ಸಾಲುಗಳೇ ಹಾಗೆ
ಗುರು ಲಘುಗಳು ವ್ಯತ್ಯಾಸವಾದರೂ ಸರಿ
ರಾಗ ತಾಳಗಳು ಆಚೀಚೆಯಾದರೂ ಆಗೆ
ಗಾನ, ಗೋಷ್ಠಿಗಳಿಗೆ ಅಸೂಕ್ತವಾದರೂ ಸರಿ
ರಾಜಾರೋಷವಾಗಲ್ಲದಿದ್ದರೂ, ಪಿಸುಗುಟ್ಟುತ್ತ  
ತಮ್ಮಗಳ ನಡುವೆಯೇ ಆಡುತ್ತವೆ ಅಂತಾಕ್ಷರಿ

=================================
56. 'ಮಾಸ'ದ ನೆನಪು
===========

ಎಂದಿಗೂ ಮಾಸದ ಬಾಲ್ಯದ ನೆನಪು  
ಚೈತ್ರ ಮಾಸದ ಬಿರು ಬೇಸಿಗೆ
ಅಂತಿಮ ಗಣಿತ ಪರೀಕ್ಷೆ  
ಇನ್ನೂ ಸಿಗದ ಲಾಸ ಮಾಸ

ಎಂದಿಗೂ ಮಾಸದ ಹೈಸ್ಕೂಲ್ ನೆನಪು
ಶ್ರಾವಣ ಮಾಸದ ಜೋರು ಮಳೆ
ಕಿಟಕಿ ಮುಚ್ಚಿ ಮೊದಲ ಕನ್ನಡ ಕ್ಲಾಸು
ತಲೆಗೇ ಹೋಗದ ಸಂಧಿ ಸಮಾಸ

ಎಂದಿಗೂ ಮಾಸದ ಕಾಲೇಜು ನೆನಪು
ಭಾದ್ರ ಮಾಸದ ಗಣಪತಿ ಹಬ್ಬ
ಕಾಲೇಜಿನ ಮೊದಲ ಸೆಮೆಸ್ಟರು
ಎಲ್ಲರ ಮೊದಲ ಮಾಸ ಬಂಕು

ಎಂದಿಗೂ ಮಾಸದ ಅಮೇರಿಕಾ ನೆನಪು
ಮಾರ್ಘಶೀರ ಮಾಸದ ಕೊರೆಯುವ ಚಳಿ
ಹೊರಗೆ ಹಿಮ, ಶೂನ್ಯ ಟೆಂಪೆರಚರು
ಒಳಗೆ ಬಿಸಿ ಕಾಫಿ ಹೊಂದಿದ್ದ ಥರಮಾಸ ಫ್ಲ್ಯಾಸ್ಕು

=================================


===========================================================================================================

I was teaching Kannada to a friend who doesn't speak Kannada! In fact, to someone that didn't even know there was a language called Kannada when we first met!
When I started reading Kannada poetry/prose all over again (that I used to do in my highschool), I realized how different the styles of Kannada Jnaanapeeth Award winners are, even if they're writing about the same theme/concept!
I tried it as an exercise to write one particular theme as if it was dealt by different poets/writers.
Obviously, this is my work and nowhere even comparable to any of the real writings/poems of the greats of Kannada language.
If the theme was related to, say, enduring the difficulties of the old age while facing an equally challenging societal interactions, how would the literature vary between different Jnanapeeth Award winning writers/poems?
KuVemPu (A touch of Malnad in his poems)
----------
ಮುಸ್ಸಂಜೆಯ ವಯಸ್ಸು
ಬರುತಿರೆ ಅಂತ ಹಂತ ಹಂತದಲಿ
ದೇಹವು ಬಾಗಿ, ಬಾಹುವು ಬಳಲಿ
ಹರಿಯುವ ತುಂಗೆ ನಾದದ ಬದಲಿ
ಕರಣಕೆ ಮೌನವೆ ಇಂಪಾಗಿರುತಲಿ
ಕರೆದವರಾರು ತಿರುಗರು ಇಂದು
ಮರುಗಿದರಿಲ್ಲ ಸೊರಗಿದರಿಲ್ಲ
ಹಸಿರ ಹೊಲದಲಿ ಎದ್ದಿಹ ಕಳೆಯ
ಕಿತ್ತುವರಿಲ್ಲ, ಬೀಜವ ಬಿತ್ತುವರಿಲ್ಲ
ಜೇವದ ಜಲಕಾರಂಜಿಯ ಬುಗ್ಗೆ
ಜಿಗಿಯದು ಇಂದು ರಭಸದಿ ನುಗ್ಗೆ
ಬದುಕ ಮುಂಜಾವು ಮುಸ್ಸಂಜೆಯಾಗೆ
ಸ್ಮರಣೆಯು ಸಾಗೆ, ಸವಿಯುತ ಹಾಗೆ
Da Ra Bendre (North Karnataka theme)
--------------
ಮುಪ್ಪಿನ ಮನಿ
ಬೆನ್ನು ಮುರಿದು ಬಿದ್ದಾ ಹೋತೋ
ಬನ್ನಿ ಮರದ ಸದ್ದಾ ಹೋತೋ
ಬನ್ನಿ ಎಂದ ಮಕ್ಕಳಿಂದು
ಬರದೆ ಶ್ಯಾನೆ ಕಾಲಾಗೋತೋ
ಬೆನ್ನಿಗಂಟಿದ್ ಬ್ಯಾನೆ ಹರಡಿ,
ಕಯ್ಯಾಗ್ ಹೋತೋ ಕಾಲಾಗೋತೋ
ಬರದಿ ಬಿದ್ದು, ಬೆಳೆದದ್ದೆಲ್ಲಾ
ಬರಡಿ ಬಾಗಿ, ಬತ್ತಾಹೋತೋ
ಹತ್ತಿ ಹೋತೊ, ಭತ್ತಹೋತೋ
ಹತ್ತಿ ಬಿತ್ತಿದ್ದೆಲ್ಲಾ ಹೋತೋ
ಒಡಲ ಬಾವೀ ನೀರು ಆವಿ
ಆಗತೀತ, ಸಡಿಲ ಬೇರು ತಾವಿ
ಅಂದು ಇಂದು ಕಾಣದಾತು
ಬೆಂದೆ ಎಂತು ಪ್ರಾಣಧಾತು
Shivaram Karanth (Intellectual essay)
-------------------
ಇಳಿ ವಯಸ್ಸಿನ ತಿಳಿ ಮನಸ್ಸು
ಅಷ್ಟೆ ಅಲ್ಲವೆ ಬದುಕು? ಊಹಿಸಲಾಗದಷ್ಟು ಸಮಯದ ಹಿಂದೆ ಊಹಿಸಲಾಗದ ಭೌಗೋಳಿಕ ಪರಿಸರದಲ್ಲಿ ಅಂಟಿಕೊಂಡ ರಸಗಳು ಮೊಳಕೆಯೊಡೆದು, ಹಿಗ್ಗಿ, ಒಂದಾಗಿ, ಮತ್ತೆ ಬೆಳೆದು, ಮಾಂತ್ರಿಕವಾಗಿ ಜೇವತ್ಂಬಿಕೊಂಡು, ಗುದ್ದಾಡಿಕೊಂಡು ಇಲ್ಲಿಯವರೆಗೆ ಬಂದು ನಿಂತದ್ದನ್ನು ನಾನು ಆಶ್ಚರ್ಯವೆನ್ನುವ ಬದಲು, ಒಂದು ಆಕಸ್ಮಿಕ ಅಪಘಾತವೆನ್ನುತ್ತೇನೆ. ಈ ಅನಿರೀಕ್ಷಿತೆಯಲ್ಲಿ ನನಗೆ ಕಾಣುವ ಒಂದೇ ನಿರೀಕ್ಷಿತ ವಸ್ತು ಎಂದರೆ ಜೇವದ ಕ್ರಮಿಕ ಬಳಲಿಕೆ, ಅದರ ಪಥನ ಮತ್ತು ಅಂತಿಮ ಕುಸಿತ. ಅಲ್ಲಿಗಾಯಿತಲ್ಲವೆ? ಇನ್ನಿಲ್ಲ ಪುನರ್ಜನ್ಮ, ಇನ್ನಿಲ್ಲ ಕರ್ಮ. ಸ್ವರ್ಗ ನರಕಗಳು ಕಾಯುವಷ್ತು ಮಹತ್ವದ್ದಲ್ಲ ಈ ಜೇವ.
ಮಂಗಳೂರಿನ ಕಡಲ ತೀರದಿ ಕುಳಿತು ಬರೆದ ಕಥೆಗಳಾಗಲಿ, ಸುಳ್ಯದ ಯಕ್ಷಗಾನದ ಪದವಾಗಲಿ, ಪುತ್ತೂರಿನ ನನ್ನ ಮೇಷ್ತ್ರಾಗಲಿ, ಏನೊಂದೂ, ಯಾರೊಬ್ಬರೂ ನನ್ನ ಜೇವದ ಕ್ರಮೇಣ ಕುಸಿತವ ತಡೆಯುವಲ್ಲಿ ನನಗಿಂತ ಶಕ್ತರಾಗಿರಲಿಲ್ಲ. ಯಾಕೆ - ಪ್ರತಿಯೊಂದೂ, ಪ್ರತಿಯೊಬ್ಬರೂ ದೂರವಾದರು. ಅಥವಾ, ನಾನೇ ದೂರನಾದೆನೆ?
ನಾನು ಯೋಚಿಸಿದ್ದೆಲ್ಲ, ಅನುಸರಿಸಿದ್ದೆಲ್ಲ, ತೀರ್ಮಾನಿಸಿದ್ದೆಲ್ಲ ಇಂದು ಇನ್ನೂ ಗಹನವಾಗಿ ಗಟ್ಟಿಯಾಗಿ ನನ್ನ ಕಾಯುತಿದೆ. ನನ್ನ ಕೊನೆಯ ದಿನಗಳ ಬಹುದೊಡ್ಡ ಸುಖ ಅದೆ - ನಾನು ನಂಬಿದ್ದ ತತ್ವಗಳ ಸತ್ವದ, ಸಿಂಧುತ್ವದ ಧ್ರುಢೀಕರಣ.
Maasti Venkatesha Iyengar (Easy-flowing short story)
---------------------------
ಪಕ್ಕದ ಮನೆ ಮುದುಕ
ಹೇಮಾವತಿ ತೀರದ ಸುಂದರ ಪರಿಸರದ ನಡುವೆ ಅರಳಿದ್ದ ಚಿಕ್ಕ ಗ್ರಾಮ ಬೆಳ್ಳಕ್ಕಿಕೆರೆಯಲ್ಲಿ ನಾನು ವಾಸವಾಗಿದ್ದಾಗ, ನನ್ನ ಪಕ್ಕದ ಮನೆಯಲ್ಲಿದ್ದ ಬೋರಜ್ಜನ ಕಥೆ ಹೇಳದೆಹೋದರೆ ಈ ಕಥಾಸಂಗ್ರಹದ ಪಾಯಸದಲ್ಲಿ ಗೋಡಂಬಿಯಿಲ್ಲದಂತಾದೀತು. ಬೋರಜ್ಜನ ಕಥೆ ಶುರುವಾಗೋದೆ ಅವನ ಕೊನೆಯ ದಿನಗಳಿಂದ. ಅಂದೋ ಇಂದೋ ಅನ್ನುತಿರುವ ಜೇವದ ಕಥೆ ಏನು ಸೊಗಸು ಎನ್ನದಿರಿ. ಅವನ ದೇಹ ಬಗ್ಗಿದ್ದಿದ್ದುಂಟು, ಕಣ್ಣು ಫಳಫಳ ಬೆಳಕಿಗೆ ಬೆದರುತ್ತಿದ್ದುಂಟು, ಅವನ ಮಕ್ಕಳು ಮರಿ ಎಂದೋ ಅವನನ್ನು ಬಿಟ್ಟು ಹಾಸನ ಸೇರಿದ್ದುದುಂಟು. ಆದರೆ ಅವನ ಯೋಚನೆಗಳಲ್ಲಿ ಅದೇ ಯುವಕನ ಹರಿತ, ತಜ್ಞನ ಪರಿಣತಿ ಎದ್ದು ರಾಚುತ್ತಿತ್ತು.
ಆ ಕಾಲಕ್ಕೆ, ಆ ಹಳ್ಲಿಗೆ ಬೋರಜ್ಜ ಒಬ್ಬ ನವೀನತಾಕಲ್ಪಕ ಎಂದೇ ಹೇಳಬಹುದು. ಮಾಡದ ಉದ್ಯಮವಿಲ್ಲ, ಮುಟ್ಟದ ವ್ಯವಹಾರವಿಲ್ಲ. ಹಳ್ಲಿಗೆ ಬಂದು ಪುರಾತನ ದೇವಾಲಯಗಳ ಅಧ್ಯಯನ ಮಾಡುತ್ತಿದ್ದ ಬಿಳೇಯರಿಗೆ ಗೈಡಾಗಿ ಬರೊಬ್ಬರಿ ಹಣ ಮಾಡಿದ್ದಲ್ಲದೆ, ಕೊಂಚ ಇಂಗ್ಲೀಶು ಕಲಿತು ಅವರಿಗೂ ಒಂದೆರಡು ಕನ್ನಡ ಪದ ಪರಿಚಯ ಮಾಡಿಸಿದ್ದಿದೆ. ಪ್ರವಾಸದ ಕಾಲವಲ್ಲದಿದ್ದಾಗ ಪಟ್ಟಣದಿಂದ ವಿಚಿತ್ರಾದಿ ಕೃಷಿ ಮಷೀನುಗಳನ್ನು ಬಾಡಿಗೆಗೆ ತಂದು ಹಳ್ಲಿಯ ಹೊಲದಲ್ಲಿ ಓಡಿಸಿ ರೈತರಿಂದ ಲಾಭ ಮಾಡಿದ್ದಿದೆ. ಒಮ್ಮೆ ಗ್ರಾಮ ಪಂಚಾಯ್ತಿ ಚುನಾವಣೆಗೆ ನಿತ್ತು, ಸೋತದ್ದೂ ಇದೆ.
ಆದರೆ ಈಗ ಅದೆಲ್ಲ ಯಾವುದೂ ಲೆಕ್ಕಕ್ಕೆ ಬರದು. ಮಾಡಿದ್ದ ದುಡ್ದು ತಪ್ಪು ಹೂಡಿಕೆಗಳಿಂದ ಯಾವುದೂ ಉಳಿದಿಲ್ಲ. ಹಿಂದೆಂದೋ ಜೋರು ಮಳೆಗೆ ತತ್ತರಗೊಂಡಿದ್ದ ಆಸ್ಪತ್ರೆಯ ಪುನರುಜ್ಜೀವನ ಮಾಡಿದ್ದಿದ್ದಕ್ಕೆ ಹಳ್ಲಿಯ ಸರ್ಕಾರಿ ಡಾಕ್ಟರ್ ಇಂದಿಗೂ ಸಣ್ಣ ಪುಟ್ಟ ಔಷಧಗಳನ್ನು ಉಚಿತವಾಗಿ ಕೊಡೋದಿದೆ. ಆದರೆ ಅದು ಸಾಕಗುವ ಸ್ಥಿತಿಯಲ್ಲಿಲ್ಲ ದೇಹ. ನೊಂದಿದೆ, ಬೆಂದಿದೆ, ಅಜ್ಞಾತವು ಮುಂದಿದೆ. ಪ್ರಪಂಚಶ್ರೇಷ್ಟತಾವಾದದ ಚಿಲುಮೆ ಅಂತರಂಗದಿಂದ ಹೊಮ್ಮಲು ಹಾತೊರೆಯುತ್ತಿದ್ದರೂ ಅನುಭವದ, ಗೋಚರದ ಬಲವು ಅದನ್ನು ಹತ್ತಿಕ್ಕಿದಂತಿದೆ.
Girish Karnad (Contemporary play)
---------------
ಹರಾಜು
ಬೆಳಗ್ಗೆ ಸುಮಾರು ೧೧ ಗಂಟೆ ---- ಹಳ್ಲಿಯ ಒಂದು ಹಳೇ ಮನೆಯ ಹೊರಗೆ ----
[ ಜನ ಸೇರಿದ್ದಾರೆ, ಸುಮಾರು ಐವತ್ತು ಮಂದಿ ಇರಬಹುದು. ಸಾಧಾರಣ ಸೂಟು ಧರಿಸಿದ ಮೂವರು ಆಫೀಸರುಗಳು ನಿಂತಿದ್ದಾರೆ. ಓಬ್ಬ ಮುದುಕ ಮತ್ತು ಸುಮಾರು ಎಂಟು ಹತ್ತು ವರ್ಷದ ಬಾಲಕ ಮನೆಯ ಹೊಸ್ತಿಲಲ್ಲಿ ಕೂತಿದ್ದಾರೆ. ಮುದುಕನ ಕಣ್ಣಲ್ಲಿ ಕಂಬನಿಯ ಹಿಂಜೋಲು ಕಾಣುತ್ತಿದೆ. ಪಕ್ಕದಲ್ಲೆ ರೆಡಿಯೊ ದನಿಮಾಡುತ್ತಿದೆ.]
ಹುಡುಗ [ಪ್ರಶ್ನಿಸುವ ದನಿಯಲ್ಲಿ] : ತಾತ, ಈ ಕೋಟಿ ಎಷ್ಟು ದೊಡ್ಡದು? ಅದಕ್ಕೆ ಎಷ್ಟು ಸೊನ್ನೆ?
ತಾತ [ಮರುಗುವ ದನಿಯಲ್ಲಿ, ಆಕಾಶದತ್ತ ನೋಡುತ್ತ] : ನನಗೆ ತಿಳಿಯದಪ್ಪ. ನಾನೆಂದೂ ಅಷ್ಟು ದುಡ್ಡು ನೋಡಿಲ್ಲ.
ಸೂಟು ಧರಿಸಿದ ಒಬ್ಬ ಅಧಿಕಾರಿ: ಬೋರಜ್ಜನ ಮನೆ, ಮತ್ತಿತರ ಸಾಮಾನು ಹರಾಜು ಕಾರ್ಯಕ್ರಮಕ್ಕೆ ಬಂದಿರೋ ನಿಮ್ಮೆಲ್ಲರಿಗೂ ಒಂದಷ್ಟು ಸೂಚನೆಗಳು. ನರ್ಮದ ಸಹಕಾರ ಬ್ಯಾಂಕಿನ ಸಾಲದ ಮೊತ್ತ ಎರಡು ಲಕ್ಷಕ್ಕೆ ಕಡಿಮೆ ಒಟ್ಟು ಹಣಕ್ಕೆ ಹರಾಜಾದರೆ ಹರಾಜನ್ನು ಮುಂದೋಡಲಾಗುವುದು. ಮೂರು ಬಾರಿ ಒಬ್ಬರ ಮೊತ್ತ ಕೂಗಿದರೆ ಆ ವಸ್ತುವಿನ ಹರಾಜು ಮುಗಿದಂತೆ.
ರೇಡಿಯೊ ಒಳಗಿಂದ ಧ್ವನಿ: ಮುಂದಿನ ಆಟಗಾರ ಭಾರತದ ಆಲ್ ರೌಂಡರ್ ಯುವರಾಜ್ ಸಿಂಗ್. ಭಾರಿ ಬೇಡಿಕೆಯಲ್ಲಿದ್ದಾರೆ. ಆಗಲೆ ಮೂರು ತಂಡಗಳು ಬಿಡ್ ಮಾಡಿವೆ. ಒಂದು ಕೋಟಿಗೆ ಡೆಲ್ಲಿ ತಂಡ ಅವರನ್ನು ಬಾಚಿಕೊಂಡಿದೆ. ಐ ಪಿ ಎಲ್ ೨೦೧೮ ರ ಡೆಲ್ಲಿ ತಂದ ಇದರಿಂದ ಬಲಿಷ್ಟಗೊಳ್ಳುವುದಂತೂ ನಿಜ.
ಸೂಟು ಧರಿಸಿದ ಬ್ಯಾಂಕ್ ಅಧಿಕಾರಿ: ಮೊದಲು ಈ ಮೂರು ಪೀಠೋಪಕರಣಗಳು. ಹಳೆಯದಾದರೋ ಮರಕ್ಕೆ ಬೆಲೆ ಇದೆ. ಆರಂಭಿಕ ಮೊತ್ತ ನಾಲ್ಕು ಸಾವಿರ.
[ಹಳೆಯದಾದ ಪೀಠೋಪಕರಣಕ್ಕೆ ಬೇಡಿಕೆ ಇದ್ದಂತಿರಲಿಲ್ಲ]
ಪಟೇಲರು: ಯಾರು ಬೇಡ ಅಂದ್ರೆ ನಾಲ್ಕಕ್ಕೇ ನಾನು ತೊಗೊತೇನೆ.
ರೇಡಿಯೊ ಒಳಗಿಂದ ಧ್ವನಿ: ಒಂದು ಕೋಟಿ ಇಪ್ಪತ್ತು ಲಕ್ಷಕ್ಕೆ ಶಿಕರ್ ಧವನ್ ರಾಜಸ್ಥಾನಿಗೆ.
ಸೂಟು ಧರಿಸಿದ ಬ್ಯಾಂಕ್ ಅಧಿಕಾರಿ: ನಾಲ್ಕು ಸಾವಿರ ಒಂದು ಸಾರಿ..
----------------------
Haven't read enough of V.K.Gokak, U.R.Ananthamurthy or Kambar to identify their styles. But I thought Ravi Belegere's would start something like this 😉
ಅಸಲಿಗೆ ಸಾಯುವಷ್ಟೇನು ವಯಸ್ಸಾಗಿರ್ಲಿಲ್ಲ ಮುದುಕಂಗೆ. ಹಳೆ ಚಟಗಳು ಒಂದಷ್ಟು ಹಾಳು ಮಾಡಿದ್ರೂ ಮುದುಕ ಗಟ್ಮುಟ್ಟಾಗೆನೊ ಇದ್ದ.
------------------------